
ಸಕಲೇಶಪುರ:ತಾಲೂಕಿನ ಹೆನ್ನಲಿ ಗ್ರಾಮದ ಸಮೀಪ ಹೇಮಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಿಸಿ ಸಂಗ್ರಹಿಸಲಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ತಹಸಿಲ್ದಾರ್ ಸುಪ್ರೀತಾ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ವನರಾಜು ಸ್ಥಳಕ್ಕೆ ಭೇಟಿ ನೀಡಿ ಸಂಗ್ರಹಿತ ಮರಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದರು.
ಪ್ರಾಥಮಿಕ ತನಿಖೆಯಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗಿರುವುದು ಸ್ಪಷ್ಟವಾಗಿದ್ದು, ಮರಳು ಸಂಗ್ರಹಿಸಿ ಇಟ್ಟವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಸಂಬಂಧಪಟ್ಟವರ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಣ್ಣುಮುಚ್ಚು ಕುಳಿತಿರುವುದರಿಂದಲೇ ಮರಳು ಕಳ್ಳರಿಗೆ ಹಬ್ಬವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ದೇಶದ ನೈಸರ್ಗಿಕ ಸಂಪತ್ತನ್ನು ಕಾಪಾಡುವ ಜವಾಬ್ದಾರಿ ಹೊಂದಿರುವ ಇಲಾಖೆ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮರಳುಗಾರಿಕೆ ಪರಿಸರ ಸಮತೋಲನಕ್ಕೆ ಧಕ್ಕೆಯುಂಟುಮಾಡುವುದರ ಜೊತೆಗೆ ಸರ್ಕಾರಕ್ಕೂ ಆದಾಯ ನಷ್ಟ ಉಂಟುಮಾಡುತ್ತದೆ. ಪ್ರಕರಣದ ಸಂಬಂಧಿತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಪಟ್ಟ ಇಲಾಖೆಗಳ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
